ನ್ಯಾಯದರ್ಶಿಗಳು -
ನ್ಯಾಯ ನಿರ್ಣಯಕ್ಕಾಗಿ ಬಂದ ಪ್ರಕರಣಗಳನ್ನು ಕುರಿತು ವಿಚಾರ ವಿನಿಮಯ ಮಾಡಿ ತೀರ್ಪು ನೀಡುವುದಕ್ಕಾಗಿ ಜವಸಾಮಾನ್ಯರಿಂದ ಆಯ್ದ ವ್ಯಕ್ತಿಗಳು, ಜೂರಿ. ಜೂರಿ ಪದ್ಧತಿ ಕಾನೂನು ವ್ಯವಸ್ಥೆಯ ಒಂದು ಅಂಗವಾಗಿದೆ. ಇದು ಇಂಗ್ಲೆಂಡ್, ಅಮೆರಿಕಗಳ ನ್ಯಾಯಾಡಳಿತ ಚರಿತ್ರೆಯಲ್ಲಿ ಬೆಳೆದುಬಂದ ಸಂಸ್ಥೆ. ಈ ಪದ್ದತಿ ಬಹುತೇಕ ಎಲ್ಲ ರಾಷ್ಟ್ರಗಳಲ್ಲೂ ರೂಢಿಯಲ್ಲಿದೆ. ಆದರೆ ಅದರ ರಚನೆ ಹಾಗೂ ಕಾರ್ಯನಿರ್ವಹಣೆ ಆಯಾ ರಾಷ್ಟ್ರ ರಾಜ್ಯಗಳ ನ್ಯಾಯ ಸಂಹಿತೆ ಹಾಗೂ ಕಾರ್ಯನಿರ್ವಹಣೆ ಆಯಾ ರಾಷ್ಟ್ರ ರಾಜ್ಯಗಳ ನ್ಯಾಯ ಸಂಹಿತೆ ಹಾಗೂ ಸಾಮಾಜಿಕ ವ್ಯವಸ್ಥೆಗಳನ್ನವಲಂಬಿಸಿದೆ. ಒಂದು ನಿರ್ದಿಷ್ಟ ಪ್ರಕರಣದ ನ್ಯಾಯ ನಿರ್ಣಯಕ್ಕಾಗಿ, ನಿಗದಿಯಾದ ಯಾವ ನಿರ್ಣಯಗಳನ್ನೂ ಅನುಸರಿಸದೆಯೆ ಅನುಭವಿಗಳಾದ ಜನಸಾಮಾನ್ಯರನ್ನು ಸದಸ್ಯರನ್ನಾಗಿ ಆರಿಸುವುದು ಜೂರಿ ಪದ್ದತಿಯ ವೈಶಿಷ್ಟ್ಯ. ಹೀಗೆ ನೇಮಕಗೊಂಡ ಸದಸ್ಯರು ಸಂಬಂಧಪಟ್ಟ ಪ್ರಕರಣವನ್ನು ಕುರಿತು ರಹಸ್ಯವಾಗಿ ಚರ್ಚಿಸಿ, ನಿರ್ಣಯಿಸಿ, ಈ ಬಗ್ಗೆ ಕಾರಣ ಕೊಡದೆ ನಿರ್ಣಯವನ್ನು ಪ್ರಕಟಿಸುವ ಅಧಿಕಾರ ಹೊಂದಿರುತ್ತಾರೆ. ಜೂರಿ ಪದ್ದತಿ ಚರಿತ್ರೆಯುದ್ದಕ್ಕೂ ಸ್ವಾತಂತ್ರ್ಯದ ಒಂದು ಚಾರ್ಟರ್ (ಅಧಿಪತ್ರ) ಎಂಬ ಪ್ರಶಂಸೆ ಗಳಿಸಿದೆ. ತಜ್ಞರಲ್ಲದವರು ಮತ್ತು ಅಸಮರ್ಥರು ಒಟ್ಟುಗೂಡಿದೆ ಒಂದು ವ್ಯವಸ್ಥೆ ಎಂಬ ಕಟುಟೀಕೆಗೂ ಇದು ಗುರಿಯಾಗಿದೆ.

	ಜೂರಿ ಪದ್ಧತಿಯ ಮೂಲ ಇತಿಹಾಸಗರ್ಭದಲ್ಲಿ ಅಡಗಿಹೋಗಿದೆ. ಯಾವುದೇ ಸ್ಥಳದಲ್ಲಿ ಉದ್ಭವಿಸಿದ ವ್ಯಾಜ್ಯವನ್ನು ಪರಿಹರಿಸಲು ಆಸುಪಾಸಿನ ಬಲ್ಲವರನ್ನು ಕರೆದು ನ್ಯಾಯನಿರ್ಣಯಕ್ಕೆ ಸಾಕ್ಷ್ಯ ನೀಡುವಂತೆ ಅಥವಾ ನ್ಯಾಯನಿರ್ಣಯ ಪ್ರಕ್ರಿಯೆಯಲ್ಲಿ ನೆರವಾಗುವಂತೆ ವಿನಂತಿಸಿಕೊಳ್ಳುವ ಪದ್ಧತಿಯಿಂದ ಈ ವ್ಯವಸ್ಥೆ ಪ್ರಾರಂಭವಾಯಿತೆನ್ನಬಹುದು. ಕ್ರಮೇಣ ಈ ಪದ್ದತಿಗೆ ಒಂದು ನಿರ್ದಿಷ್ಟ ರೂಪ ಕೊಡುವ ಆವಶ್ಯಕತೆಯುಂಟಾಯಿತು. ಅದುವರೆಗೆ ರೂಢಿಯಲ್ಲಿದ್ದ ದಿವ್ಯಗಳ (ಆರ್ಡಿಯಲ್) ಮೂಲಕ ಚಿತ್ರಹಿಂಸೆ ಕೊಟ್ಟು ಆಪಾದಿತನಿಂದ ಸತ್ಯವನ್ನು ಬಾಯಿಬಿಡಿಸುವ ಕ್ರಮವನ್ನು ಕೈಬಿಟ್ಟು ನ್ಯಾಯ ಸಭೆಯಲ್ಲಿ ಸಾದರಾದ ಸಾಕ್ಷ್ಯಗಳನ್ನು ಆಧರಿಸಿ ನ್ಯಾಯನಿರ್ಣಯ ನೀಡುವಲ್ಲಿ ಜೂರಿಗಳ ನೆರವನ್ನು ಪಡೆಯುವ ಕ್ರಮ ಚಾರಿಗೆ ಬಂತು.

	ಕ್ಲಿಷ್ಟವಾದ ವಿವಾದಗಳ ತೀರ್ಮಾನಕ್ಕೆ ಜೂರಿ ಪದ್ಧತಿಯನ್ನು ಹೋಲುವ ನ್ಯಾಯ ವ್ಯವಸ್ಥೆ ಪ್ರಾಚೀನ ಭಾರತದಲ್ಲಿ ಗೌತಮರ ಕಾಲದಿಂದಲೂ ಪ್ರಚಲಿತವಿತ್ತೆಂದು ಕಂಡುಬರುತ್ತದೆ. ವಿವಾದ ತೀರ್ಮಾನಕ್ಕಾಗಿ ರಾಜ ಮತ್ತು ನ್ಯಾಯಾಧೀಶರು ಲೇವಾದೇವಿಗಾರರು, ಕರಕುಶಲಗಾರರು, ದನಗಾಹಿಗಳು, ವ್ಯಾಪಾರಿಗಳು ಮೊದಲಾದ ವರ್ಗದವರ ಸಾಕ್ಷ್ಯ ಮತ್ತು ಸಹಾಯ ಪಡೆಯುತ್ತಿದ್ದರು. ಗಡಿ ವಿವಾದಗಳಲ್ಲಿ ಅನುಭವದಿಂದ ಸಾಕ್ಷ್ಯ ನುಡಿದು ನೆರವು ನೀಡುತ್ತಿದ್ದ ಮೂಲರು (ಹಕ್ಕು ಮೂಲಗಳನ್ನು ತಿಳಿದವರು, ಅಂದರೆ ವಯೋವೃದ್ದರು), ಸಾಮಂತರು (ಅಕ್ಕಪಕ್ಕದ ಗ್ರಾಮನಿವಾಸಿಗಳು), ಆರಣ್ಯಕರು (ಅಟವಿಪಾಲರು) ಮೊದಲಾದವರು ನ್ಯಾಯದರ್ಶಿಗಳಾಗಿ ವರ್ತಿಸುತ್ತಿದ್ದರೆಂದೂ ಧರ್ಮಶಾಸ್ತ್ರಗಳಿಂದ ಕಂಡುಬರುವುದು.

	ಬ್ರಿಟಿಷ್ ಸಾಮ್ರಾಜ್ಯ ವಿಸ್ತರಣೆಯಾದಂತೆ ಆ ದೇಶದ ಜೂರಿ ಪದ್ದತಿ ಏಷ್ಯ-ಆಫ್ರಿಕ ಅಮೆರಿಕಗಳಿಗೂ ವಿಸ್ತರಿಸಿತು. ಫ್ರಾನ್ಸಿನ ಕ್ರಾಂತಿಯ ಫಲವಾಗಿ ಜೂರಿ ಪದ್ಧತಿ ಯೂರೋಪಿನ ಇತರ ರಾಷ್ಟ್ರಗಳಲ್ಲಿ ಜನಪ್ರಿಯ ಸರ್ಕಾರದ ಒಂದು ಅವಶ್ಯ ಅಂಗವಾಗಿ ಅಸ್ತಿತ್ವಕ್ಕೆ ಬಂತು.

	ಜೂರಿಗೆ ಆಯ್ಕೆ ಮಾಡುವಾಗ ಹಿಂದಿನಿಂದಲೂ ಕೆಲವು ನಿಯಮಗಳನ್ನು ಅನುಸರಿಸಲಾಗುತ್ತಿದೆ. ಜೂರಿಯ ಸದಸ್ಯನಾಗುವವನಿಗೆ ಕನಿಷ್ಠಪಕ್ಷ ಸ್ವಲ್ಪವಾದರೂ ಆಸ್ತಿ ಇರಬೇಕು. ಜೂರಿಯ ಆಯ್ಕೆಯಲ್ಲಿ ಸಂಬಂಧಪಟ್ಟ ಸಮಾಜದ ಎಲ್ಲ ವರ್ಗಗಳವರಿಗೆ ಸರಿಯಾದ ಪ್ರಾತಿನಿಧ್ಯ ಸಿಗುವಂತೆ ವ್ಯವಸ್ಥೆಯಾಗಬೇಕೆಂಬ ಅಭಿಪ್ರಾಯಕ್ಕೆ ಈಚೆಗೆ ಮನ್ನಣೆ ದೊರೆಯುತ್ತಿದೆ. 1969ರಿಂದಲೂ ಫೆಡರಲ್ ನ್ಯಾಯಾಲಯಗಳಿಗೆ ನಡೆಯುವ ಆಯ್ಕೆ ಈ ತತ್ವವನ್ನೇ ಆಧರಿಸಿದೆ. ವಕೀಲರು, ವೈದ್ಯರು, ಪೋಲೀಸರನ್ನು ಮಾತ್ರ ಜೂರಿ ಸೇವೆಯಿಂದ ಹೊರತುಪಡಿಸಲಾಗುತ್ತಿತ್ತು. ಕೆಲವು ಕಡೆಗಳಲ್ಲಿ ಮಹಿಳೆಯರನ್ನು ಈ ಕ್ಷೇತ್ರದಿಂದ ಹೊರತುಪಡಿಸಲಾಗಿದೆ. ಯಾವುದೇ ವ್ಯಕ್ತಿ ಜೂರಿ ಸೇವೆಯನ್ನು ಒಪ್ಪಿಕೊಳ್ಳುವುದರಿಂದ ಅವನ ಕಾರ್ಯಭಾರ ಅತಿಯಾಗುವ ಕಾರಣ ಆ ಸೇವೆಯಿಂದ ತನ್ನನ್ನು ವಿನಾಯಿತಿಗೊಳಿಸಬೇಕೆಂದು ಕೇಳಿಕೊಂಡ ಸಂದರ್ಭದಲ್ಲಿ ವಿನಾಯಿತಿ ತೋರುವ ಕ್ರಮ ಎಲ್ಲ ಜೂರಿ ಪದ್ಧತಿಗಳಲ್ಲೂ ಉಂಟು.

	ಪರಂಪರಾಗತವಾಗಿ ಜೂರಿಗಳ ಸಂಖ್ಯೆ 12. ಆಂಗ್ಲೊ-ಅಮೆರಿಕನ್ ಜೂರಿ ಪದ್ಧತಿಯಲ್ಲಿ ನಿರ್ಣಯ ಸರ್ವಾನುಮತದಿಂದ ಆಗುತ್ತದೆ. ಉಳಿದ ಕಡೆಗಳಲ್ಲಿ ನಿರ್ಣಯಕ್ಕೆ ಬಹುಮತ ಅವಶ್ಯ.

	ಸಿವಿಲ್ ಮೊಕದ್ದಮೆಗಳಲ್ಲಿ ಜೂರಿಗಳು ದೋಷಸಿದ್ಧಿ ಮತ್ತು ನಷ್ಟದ ಮೊತ್ತವನ್ನು ನಿರ್ಣಯಿಸುತ್ತಾರೆ. ಆದರೆ ಕ್ರಿಮಿನಲ್ ಮೊಕದ್ದಮೆಗಳಲ್ಲಿ ಅಪರಾಧ ನಿರ್ಣಯವನ್ನು ಮಾತ್ರ ಮಾಡುತ್ತಾರೆ. ಶಿಕ್ಷೆ, ದಂಡ ಮುಂತಾದವು ನ್ಯಾಯಾಧೀಶರಿಗೆ ಸೇರಿದವು. (ನಿರ್ಣಯೇ ವಯಂ ಪ್ರಮಾಣಂ ಶೇಷೇತು ರಾಜಾ, ಎಂಬುದು ಧರ್ಮಶಾಸ್ತ್ರಕಾರರ ಮಾತು.)

	ಜೂರಿ ನಡೆಸುವ ನ್ಯಾಯ, ವಿಚಾರಣಾ ನ್ಯಾಯಾಧೀಶರ ಮೇಲ್ವಿಚಾರಣೆಗೆ ಒಳಪಟ್ಟಿರುತ್ತದೆ. ಜೂರಿಗಳು ಸಾಮಾನ್ಯವಾಗಿ ಒಂದು ಪ್ರಕರಣದ ಮೊಕದ್ದಮೆಯನ್ನು ನಿರ್ಣಯಿಸುವಾಗ ಅಪರಾಧ ಮತ್ತು ಶಿಕ್ಷೆಗೆ ಸಂಬಂಧಿಸಿದಂತೆ ಅಹುದು ಅಥವಾ ಇಲ್ಲ ಎಂಬುದಾಗಿ ಸ್ಥೂಲ ತೀರ್ಪು ನೀಡುತ್ತಾರೆ. ಆ ಬಗ್ಗೆ ಕಾರಣ ನೀಡಬೇಕಾಗಿಲ್ಲ.

	ಜೂರಿ ಪದ್ಧತಿಯ ಬಗ್ಗೆ ಸಾಕಷ್ಟು ವಾದ-ವಿವಾದಗಳು ನಡೆಯುತ್ತಿವೆ. ಇಬ್ಬಣಗಳಲ್ಲೂ ಕಾನೂನು ಪಂಡಿತರು, ತತ್ತ್ವಜ್ಞಾನಿಗಳು ಹಾಗೂ ರಾಜಕೀಯ ವಿಚಾರವಂತರಿದ್ದಾರೆ. ಈ ವಿವಾದಗಳ ಮುಖ್ಯಾಂಶಗಳೆಂದರೆ: 1 ಜೂರಿ ಎಷ್ಟೆಂದರೂ ಗೌಣ. 2 ತಮ್ಮ ಅಪಾರ ಜ್ಞಾನ, ಅನುಭವ, ತರಬೇತಿ, ಅಧಿಕಾರಪದದ ಹೊಣೆ ಇವುಗಳಿಂದಾಗಿ ನ್ಯಾಯಾಧೀಶರು ಜೂರಿಗಿಂತ ಈ ಕೆಲಸಕ್ಕೆ ಹೆಚ್ಚು ಆರ್ಹ. 3 ಮೊಕದ್ದಮೆಗೆ ಸಂಬಂಧಿಸಿದಂತೆ ಅರ್ಥವಿವರಣೆ ನೀಡುವ ಸಾಮಥ್ರ್ಯ ಅಥವಾ ಅನ್ವಯಜ್ಞಾನ ಜೂರಿಗಳಿಗೆ ಇರುವುದಿಲ್ಲ. 4 ಹನ್ನೆರಡು ಜನರಿಂದ ಕೂಡಿದ ಜೂರಿ ಏಕ ವ್ಯಕ್ತಿಯ ಅನುಭವಕ್ಕಿಂತ ವಿಸ್ತಾರವಾದ ಲೋಕಾನುಭವವನ್ನು ಹೊಂದಿ ಪ್ರತಿಯೊಂದು ಮೊಕದ್ದಮೆಯನ್ನೂ ಹೊಸ ದೃಷ್ಟಿಕೋನದಿಂದ ವೀಕ್ಷಿಸಲು ಸಮರ್ಥವಾಗಿರುತ್ತದೆ.

	ಜೂರಿ ಪದ್ಧತಿಯ ಕಾರ್ಯ ನಿರ್ವಹಣೆಯನ್ನು ಕುರಿತು ಇತ್ತೀಚಿಗೆ ಕೈಗೊಂಡ ಸಮೀಕ್ಷೆಯಿಂದ, ಜೂರಿ ನಿರ್ಣಯ ಮತ್ತು ನ್ಯಾಯಾಧೀಶರ ತೀರ್ಪುಗಳ ನಡುವೆ ವ್ಯತ್ಯಾಸ ಕಂಡುಬಾರದ ಸಂದರ್ಭಗಳೇ ಹೆಚ್ಚು ಎಂಬುದು ವ್ಯಕ್ತಪಟ್ಟಿದೆ. ಒಟ್ಟಿನಲ್ಲಿ ಜೂರಿ ಪದ್ಧತಿಯನ್ನು ನ್ಯಾಯಾಡಳಿತ ವ್ಯವಸ್ಥೆಯಲ್ಲಿ ಒಂದು ಪೂರಕವಾದ ಹಾಗೂ ಅವಶ್ಯಕವಾದ ಅಂಗವೆಂದು ಪರಿಗಣಿಸಬಹುದಾಗಿದೆಯೆಂಬ ಅಭಿಪ್ರಾಯವಿದೆ.

	ಪ್ರಾಚೀನ ಕರ್ನಾಟಕದಲ್ಲಿ ಆಚರಣೆಯಲ್ಲಿದ್ದ ದಿವ್ಯಗಳು ಜೂರಿ ಪದ್ಧತಿಗೆ ಸಮನಾದವು ಎನ್ನಬಹುದು. ಈ ದಿವ್ಯ ಪರೀಕ್ಷೆಗಳಿಂದ ನ್ಯಾಯದರ್ಶನ ದೊರೆಯುತ್ತಿತ್ತೆಂದು ಕನ್ನಡ ಶಾಸನಗಳಿಂದ ತಿಳಿದುಬರುತ್ತದೆ.

	ಇದಲ್ಲದೆ ಭಾರತದ ಪ್ರಾಚೀನ ಗ್ರಾಮ ಸಭೆಗಳೂ ಜೂರಿಯ ಪಾತ್ರವನ್ನು ನಿರ್ವಹಿಸಿವೆಯೆಂದು ಹೇಳಬಹುದು. ಗ್ರಾಮಸಭೆ ಬಹುಮಟ್ಟಿಗೆ ಲೌಕಿಕಪ್ರಜ್ಞೆಯನ್ನಾಶ್ರಯಿಸಿ ತೀರ್ಪು ಕೊಡುತ್ತಿದ್ದಿರಬೇಕು. ಗ್ರಾಮಸ್ಥರ ಕುಂದು ಕೊರತೆಗಳ ನಿವಾರಣೆಗಾಗಿ ಅಥವಾ-ವಾದ ವಿವಾದಗಳನ್ನು ಪರಿಹರಿಸುವುದಕ್ಕಾಗಿ ಸೇರುತ್ತಿದ್ದ ಈ ಹಿರಿಯರ ಸಭೆಗೆ ಹೆಚ್ಚಿನ ಮನ್ನಣೆ ಇತ್ತು. ಶಾಸನಗಳಲ್ಲಿ ಬರುವ ಅಂಥ ಸಭೆಗಳ ಉಲ್ಲೇಖಗಳಲ್ಲಿ ಸತ್ಯಕಾನೀನ, ವಿವೇಕಬೃಹಸ್ಪತಿ ಎಂಬ ವಿಶೇಷಣಗಳನ್ನು ನೋಡಿದರೆ ಸಭೆಗಳಲ್ಲಿ ಅವನ ಮಾತಿಗೆ ಬಹು ಬೆಲೆಯಿದ್ದಿತೆಂದು ಕಾಣುತ್ತದೆ. ಗ್ರಾಮಸಭೆಯ ತೀರ್ಪುಗಳನ್ನು ಬಹುಮಟ್ಟಿಗೆ ಯಾರೂ ಉಲ್ಲಂಘಿಸುವಂತಿರಲಿಲ್ಲ.

	ಜೂರಿ ಪದ್ಧತಿ ಈಗ ಭಾರತದಲ್ಲಿ ಅಸ್ತಿತ್ವದಲ್ಲಿಲ್ಲ.							(ಕೆ.ಎ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ